Sunday, July 6, 2008

ಯಾತನೆ ..

ಯಾತನೆ, ಈ ಹೆಸರಿನ ಬ್ಲಾಗ್ ಮಾಡುವ ಸಣ್ಣದೊಂದು ಆಸೆ ಮನಸೊಳಗೆ ಬಂದಾಗ ಆ ಹೆಸರು ಯಾರಾದರೂ ಈ ಮುಂಚೆಯೇ ಮಾಡಿದ್ರೆ ಅನ್ನೋ ಅನುಮಾನ ಇತ್ತು. ಆದರದು ಯಾವಾಗ ಖಾಲಿ ಇದೆ ಅಂತ ಗೊತ್ತಾಯ್ತೋ ತೆಪ್ಪಗೆ ಬ್ಲಾಗ್ ಬರೆಯಲು ಕುಳಿತೆ. ಆ ಹೆಸರು ನನ್ನ ಪಾಲಿಗೆ ಅದ್ಭುತ ಹೆಸರು. ಕಳೆದ ಕೆಲವು ದಿನಗಳಿಂದ ನಾನ್ ಅನುಭವಿಸ್ತಿರೋ ಯಾತನೆ ಇದಿಯಲ್ಲ, ಅದು ನಂಗೆ ಮಾತ್ರ ಸಹಿಸೋಕೆ ಸಾಧ್ಯವೇನೋ. ಅದನ್ನ ಯಾರ್ ಹತ್ತಿರನಾದ್ರೂ ಹೇಳಿ ಜೋರಾಗಿ ಅತ್ತು ಬಿಡಬೇಕು ಅನಿಸಿದ್ದಿದೆ. ಆದ್ರೆ ಯಾರಿಗೂ ಗೊತ್ತಾಗೋದು ಬೇಡ ಅನ್ನೋ ಕಾರಣಕ್ಕೆ ಸುಮ್ಮನಾಗಿ ರೂಮಿನ ಬಾಗಿಲು ಭದ್ರವಾಗಿ ಜಡಿದು ಗಂಟೆಗಟ್ಟಲೆ ಬಿಕ್ಕಿಬಿಕ್ಕಿ ಅತ್ತಿದ್ದೇನೆ. ಕಾರಣ ಮತ್ತದೇ ಯಾತನೆ. ಆ ಯಾತನೆಗೆ ಕಾರಣ ಯಾವುದೋ ಹೊಟ್ಟೆ ನೋವಲ್ಲ.. ತಲೆ ನೋವಲ್ಲ.. ಹಲ್ಲು ನೋವಲ್ಲ.. ಅದು ಪ್ರೀತಿಯ ನೋವು.. ಅವಳು ನನ್ನ ಕೈ ಬಿಟ್ಟು ಹೋದ ನೋವು.. ಅವಳಿಲ್ಲದೆ ನಾನು ಅನುಭವಿಸುತ್ತಿರುವ ಯಾತನೆ.. ಆದ್ರೆ ಇದು ಕಾಯ್ಕಿಣಿ ಸರ್ ಬರೆದ ಮಧುರ ಯಾತನೆ ಆಗದಿರೋದು ನನ್ನ ಮಟ್ಟಿಗೆ ಬಹು ದೊಡ್ಡ ದುರಂತ.. ಈ ಕ್ಷಣದವರೆಗೂ ನನಗೆ ಅರ್ಥವಾಗಿಲ್ಲ ಅವಳಿಗೆ ನಾನ್ಯಾಕೆ ಬೇಡವಾದೆ ಅಂತ. ಇದ್ದಕ್ಕಿದ್ದ ಹಾಗೆ ನಂಗೆ ನಿನ್ನ ಅವಶ್ಯಕತೆ ಇಲ್ಲ ಎಂಬಂತೆ ನಟಿಸಿದಳವಳು. ನಾನು ಅನುಮಾನದಿಂದಲೇ ಕೇಳಿದ್ದೆ, ನಿನಗೆ ನಾನು ಬೇಡ ಅನಿಸಿಬಿಟ್ನಾ ಅಂತ. ಛೆ..ಛೆ ಇಲ್ಲ ಅಂತ ಹೇಳಿ ಹೇಳಿ ಒಂದಿನ ಮೇಲ್ ಕಲಿಸಿಯೇ ಬಿಟ್ಟಳು. ನಂಗೆ ನಮ್ಮಪ್ಪಂಗೆ ಮೋಸ ಮಾಡೋಕೆ ಇಷ್ಟ ಇಲ್ಲ. ನನ್ನ ದಯವಿಟ್ಟು ಮರೆತುಬಿಡು ಅಂತ. ಅವಳನ್ನ ಬರಿಯಾಗಿ ಪ್ರೀತಿಸಿದ್ದಿದ್ರೆ ಆ ಕ್ಷಣವೇಮರೆತು ಮೌನವಾಗಿಬಿಡ್ತಿದ್ನೇನೋ. ಆದ್ರೆ ಅವಳನ್ನು ನಾನು ಬರೀ ಪ್ರೀತಿಸಿರಲಿಲ್ಲ, ಆರಾಧಿಸಿದ್ದೆ. ಪ್ರತಿ ಕ್ಷಣವು ಅವಳಿಲ್ಲದ ಕೊರಗು ನನ್ನನದ್ಯಾವ ಪರಿ ಕಾಡ್ತಿದೆ ಅಂದ್ರೆ, ಅವಳ ಹೊರತು ನನ್ನ ಜೀವನವೇ ಇಲ್ಲ ಎಂದುಕೊಂಡು ಕೆಟ್ಟ ನಿರ್ಧಾರಕ್ಕೂ ಕೈ ಹಾಕಿದ್ದೆ. ಆದರೆ ನನ್ನನ್ನ ಇಷ್ಟ ಪಡುವ ಜೀವಗಳನ್ನ ನೆನೆದು ಸುಮ್ಮನಾದೆ. ಆದರೆ ಅವಳಿಗೆ ನಾನಿನ್ನೂ ಜೀವಂತವಾಗಿರುವುದಕ್ಕೆ ಬೇಸರವಿದೆ, ಅದು ನನಗೆ ತಾಳಲಾಗದ ನೋವು. ನಾನು ಸಾಯ್ತೀನಿ ಅಂತ ಉದ್ದದ ಮೆಸೇಜ್ ಕಳಿಸಿದಾಗಲೂ ಅವಳು ಒಂದು ರಿಪ್ಲೇ ಮಾಡಿರಲಿಲ್ಲ. ಸತ್ತರೆ ಸಾಯಿಲಿ ಅಂತ ಇರಬೇಕು. ಆದ್ರೆ ನನಗೆ ಚೆನ್ನಾಗಿ ಗೊತ್ತು, ಅವಳು ಅಷ್ಟು ಕೆಟ್ಟವಳಲ್ಲ. ಅವಳೂ ನನ್ನನ್ನ ಕೆಲವು ದಿನ ಪ್ರೀತ್ಸಿದಾಳೆ. ನನ್ನೊಲವ ಜೀವಾ ಅದು.. ಆದರೆ ಇವತ್ತು ನನ್ನೊಳಗಿಲ್ಲ ಅಷ್ಟೆ. ಇನ್ಯಾವತ್ತು ಅವಳು ನಂಗೆ ಸಿಗೋಲ್ಲ ಅನ್ನೋದು ನಂಗು ಗೊತ್ತು ಆದ್ರೆ, ಅವಳ ಹೊರತು ನಾನು ಬದುಕೊಲ್ಲ ಅನ್ನೋದು ನನ್ನ ಮನಸ್ಸಿಗೆ ಮಾತ್ರ ಗೊತ್ತು. ಅವಳನ್ನು ಮರೆತು ಮೌನವಾಗುವ ಪ್ರಯತ್ನದಲ್ಲಿದ್ದೇನೆ. ಆ ಇಲ್ಲದ ದೇವರು ನನಗೆ ಆ ಶಕ್ತಿ ಕೊಡಲಿ.. ಇಲ್ಲವೇ ನನ್ನ ಹೃದಯಕ್ಕೆ ಕೊಡಲಿ ಇಟ್ಟವಳನ್ನು ನನಗೆ ಒಲಿಸಿಕೊಡಲಿ...